ಮರಾಠರ ಪ್ರಾಬಲ್ಯವನ್ನು ಸಂಪುರ್ಣವಾಗಿ ಉಡುಗಿಸಿದ ಮೂರನೆಯ ಮರಾಠಾ ಯುದ್ಧಕ್ಕೆ ಮೊದಲು ಗ್ವಾಲಿಯರಿನ ರಾಜ ದೌಲತ್ರಾವ್ ಸಿಂಧ್ಯ ಬ್ರಿಟಿಷರೊಡನೆ ಗ್ವಾಲಿಯರಿನಲ್ಲಿ ಮಾಡಿಕೊಂಡ ಕೌಲು (1817). ಗ್ವಾಲಿಯರಿನ ರಾಜಪ್ರಾತಿನಿಧ್ಯದ ವಿಚಾರವಾಗಿ ವ್ಯಾಜ್ಯ ಉದಿಸಿದೆಯೆಂಬ ನೆವದಿಂದ ಬ್ರಿಟಿಷರು 1843ರಲ್ಲಿ ಗ್ವಾಲಿಯರಿನ ಮೇಲೆ ದಂಡೆತ್ತಿ ಹೋಗಿ ಅಲ್ಲಿಯ ರಾಜಮನೆತನದವರನ್ನು ಮಣಿಸಿ ಅವರಿಂದ ಬರೆಯಿಸಿಕೊಂಡ ಕೌಲನ್ನೂ (1844) ಈ ಹೆಸರಿನಿಂದ ಕರೆಯುವುದಿದೆ. 1817ರ ಕೌಲಿನಂತೆ ದೊರೆ ದೌಲತ್ರಾವ್ ಸಿಂಧ್ಯ ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಮರಾಠರ ಜೊತೆ ಸೇರದೆ ನಿಂತನಲ್ಲದೆ ಬ್ರಿಟಿಷರಿಗೆ ಅಧೀನತ್ವವನ್ನು ಒಪ್ಪಿಕೊಂಡ. ಪಿಂಡಾರೆಯವರನ್ನು ಅಡಗಿಸಲು ಬ್ರಿಟಿಷರಿಗೆ ನೆರವು ನೀಡಲು ಒಪ್ಪಿದ. ಅಜ್ಮೀರ್ ಪ್ರದೇಶ ಬ್ರಿಟಿಷರಿಗೆ ವರ್ಗವಾಯಿತು.

1817ರ ಕೌಲಿನಿಂದ ಸಿಂಧ್ಯನ ಪ್ರತಿಷ್ಠೆ ಕುಂದಿತಲ್ಲದೆ ಬ್ರಿಟಿಷರ ಪ್ರಭಾವ ಅಲ್ಲಿ ಸ್ಥಾಪಿತವಾಯಿತು. ಬ್ರಿಟಿಷ್ ರೆಸಿಡೆಂಟನೊಬ್ಬನನ್ನು ಗ್ವಾಲಿಯರ್ನಲ್ಲಿರಿಸಲಾಯಿತು. ಗ್ವಾಲಿಯರ್ ರಾಜ್ಯದ ಮೇಲೆ ತಮ್ಮ ಪುರ್ಣ ಹತೋಟಿ ಸ್ಥಾಪಿಸಲು ಹವಣಿಸುತ್ತಿದ್ದ ಬ್ರಿಟಿಷರ ಉದ್ದೇಶ 1844ರ ಕೌಲಿನಿಂದ ನೆರವೇರಿತು.

ಎರಡನೆಯ ಕೌಲಿಗೆ ಕಾರಣವಾದ ಸನ್ನಿವೇಶಗಳು ಹಲವು. ದೌಲತ್ರಾವ್ ಸಿಂಧ್ಯ 1827ರಲ್ಲಿ ನಿಧಾನನಾದಾಗ ಅವನ ರಾಣಿಯಾದ ಜೈಜಾಬಾಯಿ ಜಂಕೋಜಿರಾವ್ ಎಂಬ ಹುಡುಗನನ್ನು ದತ್ತು ತೆಗೆದುಕೊಂಡು ಅವನ ಪರವಾಗಿ ತಾನೇ ಅಧಿಕಾರ ವಹಿಸಿದಳು. ಜಂಕೋಜಿ 1833ರಲ್ಲಿ ಬಲಾತ್ಕಾರದಿಂದ ಅಧಿಕಾರ ವಹಿಸಿಕೊಂಡ. ಆ ಸಮಯದಲ್ಲಿ ಅವನು ಬ್ರಿಟಿಷರಿಗೆ ಅನೇಕ ಸವಲತ್ತುಗಳನ್ನು ವಹಿಸಿಕೊಟ್ಟ. ಆದರೆ ಜಂಕೋಜಿ 1843ರಲ್ಲಿ ಮಕ್ಕಳಿಲ್ಲದೆ ಮರಣ ಹೊಂದಿದ. ಆಗ ಅವನ ರಾಣಿ 11 ವಯಸ್ಸಿನವಳಾಗಿದ್ದುದರಿಂದ ಬ್ರಿಟಿಷರು ತಮ್ಮ ಪ್ರಾಬಲ್ಯವನ್ನು ಅಲ್ಲಿ ಸ್ಥಾಪಿಸಲು ಅನುಕೂಲವಾಯಿತು. ಅವಳು 9 ವರ್ಷ ವಯಸ್ಸಿನ ಜಿಯಾಜಿರಾಯನನ್ನು ದತ್ತು ತೆಗೆದುಕೊಂಡಳು. ರಾಣಿಯೂ ಅವಳ ದತ್ತು ಮಗನೂ ಅಪ್ರಾಪ್ತವಯಸ್ಕರಾಗಿದ್ದುದರಿಂದ ಬ್ರಿಟಿಷ್ ರೆಸಿಡೆಂಟ್ ಮಾಮ್ ಸಾಹೇಬನನ್ನು ರಾಜಪ್ರತಿನಿಧಿಯಾಗಿ ಆಡಳಿತ ನಡೆಸಲು ನೇಮಿಸಿದ. ಆದರೆ ಗ್ವಾಲಿಯರಿನ ಮುಖಂಡರು ಅವನ ಆಡಳಿತವನ್ನೊಪ್ಪಲಿಲ್ಲ. ಮಾಮ್ ಅಸಮರ್ಥನೆಂಬುದು ಸ್ಥಿರಪಟ್ಟಾಗ ಗ್ವಾಲಿಯರಿನ ಮುಖಂಡರ ಬೆಂಬಲ ಗಳಿಸಿದ್ದ ದಾದಾ ಬಸ್ಜಿವಾಲನನ್ನು ಆರಿಸಲಾಯಿತು. ಗವರ್ನರ್ ಜನರಲ್ ಲಾರ್ಡ್ ಅಲೆನ್ಬರೋ ಈ ವ್ಯವಸ್ಥೆಗೆ ಒಪ್ಪಲಿಲ್ಲ. ಆ ಸಂದಿಗ್ಧ ಸಮಯದಲ್ಲಿ ಗ್ವಾಲಿಯರ್ ಸಂಸ್ಥಾನದ ಮೇಲೆ ಬ್ರಿಟಿಷರ ಪುರ್ಣ ಹತೋಟಿ ಸ್ಥಾಪಿಸಲು ಅಲೆನ್ಬರೋ ಕಾತರನಾಗಿದ್ದ. ಅವನ ಅಪ್ಪಣೆಯ ಮೇರೆಗೆ ದಾದಾ ಬಸ್ಜಿವಾಲನನ್ನು ಬ್ರಿಟಿಷರಿಗೆ ಒಪ್ಪಿಸಬೇಕೆಂಬ ಒತ್ತಾಯಕ್ಕೆ ಮಣಿಯಲೇಬೇಕಾಯಿತು. ಅನೇಕ ಸಲ್ಲದ ನೆವಗಳಿಂದ 1843ರ ಡಿಸೆಂಬರ್ ಕೊನೆಯಲ್ಲಿ ಬ್ರಿಟಿಷ್ ಸೇನೆ ಗ್ವಾಲಿಯರ್ನ್ನು ಪ್ರವೇಶಿಸಿತು. ಅಲೆನ್ಬರೋ ಸಹ ಸೇನೆಯ ಜೊತೆಯಲ್ಲಿ ಬಂದ. ಬ್ರಿಟಿಷ್ ಸೈನಿಕರಿಗೂ ಗ್ವಾಲಿಯರ ಸೈನ್ಯಕ್ಕೂ ಯುದ್ಧ ನಡೆಯಿತು. ಗ್ವಾಲಿಯರ್ ಸೈನ್ಯ ವೀರಾವೇಶದಿಂದ ಹೋರಾಡಿದರೂ ಸೋತುಹೋಯಿತು. 1844ರ ಜನವರಿ 5ರಂದು ಗವರ್ನರ್-ಜನರಲ್ ಅಪ್ರಾಪ್ತ ವಯಸ್ಸಿನ ಮಹಾರಾಣಿಯನ್ನೂ ಅವಳ ದತ್ತುಮಗನನ್ನೂ ಅರಮನೆಯಲ್ಲಿ ಸಂಧಿಸಿ ಗ್ವಾಲಿಯರ್ ರಾಜ್ಯದ ಭವಿಷ್ಯಕ್ಕೆ ಸಂಬಂಧಿಸಿದ ತನ್ನ ಷರತ್ತುಗಳನ್ನು ಬರೆಸಿ ಅವರಿಂದ ಒಪ್ಪಿಗೆ ಪಡೆದ. ಈ ಕೌಲಿನ ಪ್ರಕಾರ ಅಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬ್ರಿಟಿಷ್ ಸೈನ್ಯವೊಂದನ್ನು ನೆಲೆಗೊಳಿಸಲಾಯಿತು. ಅದರ ನಿರ್ವಹಣೆಗಾಗಿ ಹಲವು ಜಿಲ್ಲೆಗಳ ಸಾಮಾನ್ಯ ಆಡಳಿತವನ್ನು ಬ್ರಿಟಿಷರಿಗೆ ವಹಿಸಲಾಯಿತು. ಗ್ವಾಲಿಯರ್ ರಾಜಮನೆತನ 26 ಲಕ್ಷ ರೂಪಾಯಿಗಳನ್ನು ಬ್ರಿಟಿಷ್ ಸರ್ಕಾರಕ್ಕೆ ಕೊಡಬೇಕಾಯಿತು. ಗ್ವಾಲಿಯರ್ ಸಂಸ್ಥಾನದ ಸೈನ್ಯಬಲವನ್ನು 9,000ಕ್ಕೆ ಸೀಮಿತಗೊಳಿಸಬೇಕೆಂದೂ ರಾಣಿಯ ದತ್ತುಪುತ್ರನಾದ ಜಿಯಾಜಿರಾಯನಿಗೆ 19 ವರ್ಷ ಆಗುವವರೆಗೆ ಸಂಸ್ಥಾನದ ಆಡಳಿತವನ್ನು ಬ್ರಿಟಿಷ್ರಿಂದ ನಿಯೋಜಿಸಲ್ಪಟ್ಟ ಪ್ರತಿನಿಧಿ ಮಂಡಳಿ ನಡೆಸತಕ್ಕದ್ದೆಂದೂ ಆ ಮಂಡಳಿ ಬ್ರಿಟಿಷ್ ರೆಸಿಡೆಂಟನ ಅಭಿಪ್ರಾಯದಂತೆ ಕಾರ್ಯ ನಿರ್ವಹಿಸತಕ್ಕದ್ದೆಂದೂ ವಿಧಿಸಲಾಯಿತು.

ಈ ಕೌಲನ್ನು ಗವರ್ನರ್-ಜನರಲ್ ತನ್ನ ಸೈನ್ಯ ಬಲವನ್ನುಪಯೋಗಿಸಿ, ಅಕಾರಣವಾಗಿ ಬೆದರಿಕೆಯನ್ನುಂಟುಮಾಡಿ ಅಲ್ಲಿಯ ರಾಜಮನೆತನದ ಮೇಲೆ ಬಲಾತ್ಕಾರವಾಗಿ ಹೇರಿದ. ಇದರಿಂದ ಗ್ವಾಲಿಯರ್ ಬ್ರಿಟಿಷರ ಆಶ್ರಿತ ಸಂಸ್ಥಾನವಾಗಿ, ತನ್ನ ಸ್ವಾತಂತ್ರ್ಯ ಕಳೆದುಕೊಂಡಿತು.		(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ